ತಾತಾ, ಆರ್
	1876-1932. ಕನ್ನಡ ನಾಡಿನ ಹೊರಗಿದ್ದುಕೊಂಡೇ ಕನ್ನಡದ ಕೆಲಸ ಮಾಡಿದ ಮಹನೀಯರು. ಇವರ ಪೂರ್ಣ ಹೆಸರು ರಾಜಕವಿ ತಾತಾಚಾರ್ಯ. ಮೈಸೂರಿನವರಾದ ಇವರ ತಂದೆ ರಾಜಕವಿ ತಿರುಮಲೆ ವೆಂಕಟಚಾರ್ಯರು ವರದಾಚಾರ್ಯರ ನಾಟಕ ಸಂಸ್ಥೆಗೆ ನಾಟಕಗಳನ್ನು ಬರೆದು ಕೊಡುತ್ತಿದ್ದರು. ಇದರಿಂದಾಗಿ ತಾತಾಚಾರ್ಯರಿಗೆ ಬಾಲ್ಯದಿಂದಲೂ ಕವಿಗಳ, ಕಲಾವಿದರ, ವಿದ್ವಾಂಸರ ಪರಿಚಯ ಬೆಳೆಯಿತಲ್ಲದೆ ಸಾಂಪ್ರದಾಯಿಕ ವಿದ್ವತ್ತನ್ನು ಗಳಿಸುವುದು ಸಾಧ್ಯವಾಯಿತು. ಜೊತೆಗೆ ಇವರು ಮದ್ರಾಸು ವಿಶ್ವವಿದ್ಯಾನಿಲಯದ ಎಂ.ಎ., ಎಲ್.ಟಿ. ಪದವೀಧರರಾದರು. ಅನಂತರ ಮದ್ರಾಸು ವಿದ್ಯಾ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು; ರಾಜಮಹೇಂದ್ರಿಯ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ಮದ್ರಾಸು ಟೀಚರ್ಸ್ ಟ್ರೈನಿಂಗ್ ಕಾಲೇಜಿನಲ್ಲಿ ವೈಸ್-ಪ್ರಿನ್ಸಿಪಾಲರಾಗಿಯೂ ಕೆಲಕಾಲ ದುಡಿದರು. 1920ರಲ್ಲಿ ಪಶ್ಚಿಮ ಗೋದಾವರಿ ಜಿಲ್ಲೆಯ ವಿದ್ಯಾಧಿಕಾರಿಯಾಗಿ ನೇಮಕಗೊಂಡರು.

	ಇವರ ಕನ್ನಡ ಅಭಿಮಾನ ಉತ್ಕಟವಾದುದು. ಇವರು ಕನ್ನಡದ ಉತ್ತಮ ಲೇಖಕರಲ್ಲದೆ ಉತ್ತಮ ವಾಗ್ಮಿಗಳೂ ಹೌದು. ಜೈನ, ವೀರಶೈವ ಶಾಸ್ತ್ರಗಳಲ್ಲಿ ಆಳವಾದ ಅಭ್ಯಾಸ ಮಾಡಿದ್ದರು. ಇವರು ಕಿತ್ತೀಳೆಯೂ ಕನ್ನಡವೂ, ಕನ್ನಡ ಶಬ್ದದ ವ್ಯುತ್ಪತ್ತಿ ಮುಂತಾದ ಲೇಖನಗಳನ್ನು ಬರೆದರಲ್ಲದೆ ಗಿರಿಮಲ್ಲಿಕಾರ್ಜುನ ಶತಕಂ, ಮರನ್ನಂದನ ಶತಕ-ಎಂಬ ಸ್ವತಂತ್ರ ಕಾವ್ಯಗಳನ್ನೂ ರಚಿಸಿದರು. ಧರ್ಮಾಮೃತದ ಒಂದು ಕಥೆಯ ಆಧಾರದಿಂದ ಗುರುದತ್ತರಾಯನ ಚರಿತ್ರೆಯನ್ನು ರಚಿಸಿದರು.

	ಕನ್ನಡ ಜನತೆ 1927ರಲ್ಲಿ ಮಂಗಳೂರಿನಲ್ಲಿ ನಡೆದ 13ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರನ್ನಾಗಿ ಆರಿಸಿ ಗೌರವಿಸಿತು. ಇವರು ಕೆಲಕಾಲ ಗೋದಾವರಿಯಲ್ಲಿದ್ದು ತಮ್ಮ ಕೊನೆಯ ದಿನಗಳನ್ನು ಮದ್ರಾಸಿನಲ್ಲಿ ಕಳೆದರು.														(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ